Friday, June 14, 2013

ಬೀದರ್-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದೆ.

ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಸಂಸ್ಥೆಯ ನಿಯೋಗವು ಈಚೆಗೆ ದಕ್ಷಿಣ ಮಧ್ಯ ರೈಲ್ವೆ ಜನರಲ್ ಮ್ಯಾನೇಜರ್ ಪಾಂಡೆ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿದೆ.
ಬೀದರ್ ಮತ್ತು ಬೆಂಗಳೂರು ನಡುವೆ ನಿತ್ಯವೂ ಸಾವಿರಾರು ಜನ ಪ್ರಯಾಣಿಸುತ್ತಾರೆ. ಹೀಗಾಗಿ ನಾಂದೇಡ್-ಬೀದರ್-ಬೆಂಗಳೂರು ರೈಲು ಗಾಡಿಯನ್ನು ಬೀದರ್‌ನಿಂದ ಸಂಜೆ 6 ಅಥವಾ 7 ಗಂಟೆಗೆ ಬಿಡುವಂತೆ ಕ್ರಮ ಕೈಗೊಳ್ಳಬೇಕು.
ಅದು ಸಾಧ್ಯವಾಗದಿದ್ದಲ್ಲಿ ರಾತ್ರಿ ವೇಳೆ ಬೀದರ್‌ನಿಂದ ಬೆಂಗಳೂರಿಗೆ ಹೊಸ ರೈಲು ಓಡಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಬೀದರ್-ಗುಲ್ಬರ್ಗ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 193 ಕೋಟಿ ರೂಪಾಯಿ ಅನುದಾನ ಒದಗಿಸಿದೆ. ಕೇಂದ್ರ ಸರ್ಕಾರವೂ ಇದಕ್ಕೆ ಸಮನಾದ ಪಾಲು ಬಿಡುಗಡೆ ಮಾಡಿದ್ದಲ್ಲಿ ಯೋಜನೆ ಬೇಗ ಪೂರ್ಣಗೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಲಾತೂರು- ಮುಂಬೈ ಹಾಗೂ ನಾಂದೇಡ್-ಅಮೃತಸರ ರೈಲು ಗಾಡಿಗಳನ್ನು ಬೀದರ್ ಮೂಲಕ ಓಡಿಸಬೇಕು. ಇದಕ್ಕಾಗಿ ಬೀದರ್‌ನಲ್ಲಿ ರೈಲ್ವೆ ಬೋಗಿ ಮತ್ತು ಎಂಜಿನ್ ಸ್ವಚ್ಛಗೊಳಿಸುವ ಮತ್ತು ತೊಳೆಯುವ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಕಾರ್ಯದರ್ಶಿ ವೀರೇಂದ್ರ ಪಾಟೀಲ್ ಮತ್ತಿತರರು ನಿಯೋಗದಲ್ಲಿ ಇದ್ದರು.

No comments:

Post a Comment