Tuesday, September 25, 2012

ನಾರಿ ಮುನಿದರೆ ಮಾರಿ...!



ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್‌) ಗ್ರಾಮದಲ್ಲಿ ಕುಡಿತದ ಹಾವಳಿಗೆ ಕಡಿವಾಣ ಹಾಕಲು ಮದ್ಯ ಮಾರಾಟ ಮಾಡಿದರೆ ದಂಡ ವಿಧಿಧಿಸುವುದಾಗಿ ಮತ್ತು ಮದ್ಯದ ವಾಹನ ಬಂದರೆ ಬೆಂಕಿ ಹಚ್ಚುವ ಕುರಿತು ಗ್ರಾಮಸ್ಥರು ಸ್ಪಷ್ಟ ಸಂದೇಶ ನೀಡಿದ್ದರೂ ಮದ್ಯ ಸರಬರಾಜು ಮಾಡಲು ಮುಂದಾದವರಿಗೆ ಗ್ರಾಮಸ್ಥರು ತಕ್ಕ ಶಾಸ್ತಿ ಮಾಡಿರುವ ಘಟನೆ ರವಿವಾರ ನಡೆದಿದೆ.

ಗ್ರಾಮಕ್ಕೆ ಬೆಳಗ್ಗೆ ಮದ್ಯದ ಜೊತೆಗೆ ವಾಹನದಲ್ಲಿ ಬಂದ ಜನರಿಗೆ ಮಹಿಳೆಯರು ಸೇರಿ ಯುವಕರು ವಾಹನದಲ್ಲಿರುವ ಮದ್ಯದ ಬಾಟಲ್‌ ರಸ್ತೆಗೆ ಬೀಸಾಡುವ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಶನಿವಾರವಷ್ಟೇ ಗ್ರಾಮದಲ್ಲಿ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ 50 ಸಾವಿರ ರೂ. ದಂಡ, ಠಾಣೆಯಲ್ಲಿ ದೂರು ದಾಖಲಿಸುವುದು ಹಾಗೂ ಮದ್ಯ ಸರಬರಾಜಿಗೆ ಬರುವ ವಾಹನಕ್ಕೆ ಬೆಂಕಿ ಹಚ್ಚುವ ತೀರ್ಮಾನ ಕೈಗೊಂಡಿದ್ದರು.

ಆದರೂ ರವಿವಾರ ಮತ್ತೆ ಮುಡಬಿ ಮೂಲದ ವಾಹನವೊಂದು ಮದ್ಯ ಸರಬರಾಜು ಮಾಡಲು ಗ್ರಾಮಕ್ಕೆ ಬಂದಿದೆ. ಗ್ರಾಮಸ್ಥರು ಈ ಬಗ್ಗೆ ವಿಚಾರಿಸಿದಾಗ ಬಾಕಿ ವಸೂಲಿ ಮಾಡಲು ಬಂದಿದ್ದೇವೆ ಎಂದು ಹೇಳಿದ್ದರಾದರೂ ಇದಕ್ಕೆ ತೃಪ್ತರಾಗದ ಗ್ರಾಮಸ್ಥರು ವಾಹನ ತಪಾಸಣೆ ಮಾಡಿದ್ದಾರೆ. ಅದರಲ್ಲಿ ಮದ್ಯದ ಬಾಕ್ಸ್‌ಗಳು ಕಂಡುಬಂದ ಹಿನ್ನೆಲೆಯಲ್ಲಿ ಕೆರಳಿದ ಮಹಿಳೆಯರು ಅದರಲ್ಲಿನ ಮದ್ಯದ ಬಾಟಲಿಗಳನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಗಮನಿಸಿದ ಮದ್ಯ ಮಾರಾಟಕ್ಕೆ ಬಂದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಘಟನೆ ಕುರಿತು ದೂರವಾಣಿ ಮೂಲಕ ಮುಡಬಿ ಠಾಣೆಗೆ ಸಹ ಮಾಹಿತಿ ನೀಡಲಾಗಿದೆ.




Source: http://kannada.yahoo.com/%E0%B2%A8-%E0%B2%B0-%E0%B2%AE-%E0%B2%A8-%E0%B2%A6%E0%B2%B0-113221996.html;_ylt=AqXedrO_J6udoRKADM.lDC1dzdIF;_ylu=X3oDMTQ3cTk4MTB2BG1pdANUb3BzdG9yeSBNb2R1bGUgSG9tZXBhZ2UEcGtnA2E2MDMxNWU2LTYyNWMtMzhhYy05MDRjLTgyNWQ2YWM2Y2ZlYQRwb3MDMQRzZWMDdG9wX3N0b3J5X2Nva2UEdmVyAzgxMDkxNzcwLTA2M2ItMTFlMi05YmRiLTM0MGZlZmYwOGExNg--;_ylg=X3oDMTFpYmg2MTc4BGludGwDaW4EbGFuZwNrbi1pbgRwc3RhaWQDBHBzdGNhdANob21lBHB0A3NlY3Rpb25z;_ylv=3

No comments:

Post a Comment